ತಸ್ಸಿಲಿ -
	ಪ್ರಾಗೈತಿಹಾಸಿಕ ಪ್ರಾಮುಖ್ಯವಿರುವ ಒಂದು ಪ್ರದೇಶ. ಆಫ್ರಿಕದ ಸಹಾರ ಮರುಭೂಮಿಯ ಪರ್ವತ ಪ್ರದೇಶದಲ್ಲಿದೆ. ಬಂಡೆಗಳ ಮೇಲೆ ಕೊರೆಯಲ್ಪಟ್ಟ ಇಲ್ಲಿನ ಚಿತ್ರಗಳು ಅತಿ ಪುರಾತನವಾದವೆನ್ನಲಾಗಿದೆ. ಈ ಚಿತ್ರಗಳನ್ನು ಫೌರೊ ಎಂಬ ಸಂಶೋಧಕ 1893-99ರ ಕಾಲದಲ್ಲಿ ಕಂಡುಹಿಡಿದ. ಈ ಪ್ರದೇಶದಲ್ಲಿ ಒಟ್ಟು 15,000ಕ್ಕೂ ಮೇಲ್ಪಟ್ಟು ಚಿತ್ರಗಳು, ಕೆತ್ತನೆಗಳು ಇವೆ. ಇವುಗಳಲ್ಲಿ ಚಿತ್ರಗಳೇ 10,000. ಉಳಿದವು ಕೆತ್ತನೆ. ಈ ಪ್ರದೇಶದಲ್ಲಿನ ವಾಡಿ ಜೆರಾತ್ ಎಂಬ ಒಂದು ಜಾಗದಲ್ಲೇ 4,000ಕ್ಕೂ ಹೆಚ್ಚು ಕೆತ್ತನೆಗಳು ಚಿತ್ರಗಳು ಇವೆ. ತಸ್ಸಿಲಿಯಲ್ಲಿರವಷ್ಟು ಪ್ರಾಗ್ ಐತಿಹಾಸಿಕ ಚಿತ್ರಗಳು ಪ್ರಪಂಚದ ಯಾವ ಭಾಗದಲ್ಲೂ ಕಂಡುಬರುವುದಿಲ್ಲ. ಇಲ್ಲಿನ ಒಂದು ಬಂಡೆಯಲ್ಲಿ ಭಿತ್ತಿಚಿತ್ರಗಳ 16 ಪದರುಗಳು ಕಂಡುಬಂದಿವೆ.

	ತಸ್ಸಿಲಿಯ ಚಿತ್ರ ಮತ್ತು ಕೆತ್ತನೆಗಳನ್ನು ಬೇಟೆಯ ಯುಗದವು, ದನಗಾಹಿ ಯುಗದವು, ಕುದುರೆ ಯುಗದವು, ಒಂಟೆ ಯುಗದವು ಎಂದು ಕಾಲಾನುಗುಣವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ ಆನೆ, ಖಡ್ಗಮೃಗ, ಕೋಣ, ಕುದುರೆ, ಒಂಟೆ, ಕಾಡುಕತ್ತೆ, ಸಿಂಹ ಮತ್ತು ಕುರಿ. ಹೆಚ್ಚಾಗಿ ಕಂಡುಬರುವ ಪ್ರಾಣಿ ಚಿತ್ರ ಎಂದರೆ ಅಳಿದು ಹೋದ ಬ್ಯೂಮಲಸ್ ಆ್ಯಂಟಿಕ್ವಸ್ ಎಂಬ ಕೋಣ. ಉಷ್ಟ್ರಪಕ್ಷಿಯ ಚಿತ್ರವೂ ಕಂಡುಬರುತ್ತದೆ. ವಾಡಿ ಜೆರಾತ್‍ನಲ್ಲಿ ಕುರಿಯ ಚಿತ್ರ ಇಲ್ಲ.

	ಇಲ್ಲಿನ ಚಿತ್ರಗಳು ಬೃಹದಾಕಾರದಲ್ಲಿವೆ. ಖಡ್ಗಮೃಗ 26 1/2', ಮನುಷ್ಯ 11' ಜಿರಾಫೆ 23' ಇರುವುದು ಇದಕ್ಕೆ ನಿದರ್ಶನ. ಜೊತೆ ಜೊತೆಗೇ ಚಿಕ್ಕದಾಗಿ (1 1/2' ಯಿಂದ 3' ) ಕೊರೆದಂಥ ಚಿತ್ರಗಳೂ ಇವೆ.

	ತಸ್ಸಿಲಿಯ ಕೆಲವು ಪ್ರದೇಶಗಳಲ್ಲಿ ಬಂಡೆಗಳ ಮೇಲೆ ಕೊರೆದ ಎತ್ತಿನ ಚಿತ್ರಗಳಿವೆ. ಇನ್ನೊಂದು ಹಂತದಲ್ಲಿ ಪಳಗಿಸಿದ ದನ ಮತ್ತು ನಾಯಿಗಳ ಚಿತ್ರಗಳು ಹೆಚ್ಚಾಗಿ ಕಂಡುಬರುತ್ತವೆ. ಕುದುರೆ ಮತ್ತು ಎತ್ತುಗಳು ರಥಗಳನ್ನು ಎಳೆಯುವ ಕೆತ್ತನೆಗಳು ಅತಿ ಮುಖ್ಯವಾದವು. ಮನುಷ್ಯ ಕುದುರೆಸವಾರಿ ಮಾಡುವ ಚಿತ್ರವೂ ಇದೆ. ಚಿತ್ರಗಳಲ್ಲಿನ ಆಯುಧಗಳೆಂದರೆ ಭಲ್ಲೆ, ವೃತ್ತಾಕಾರವಾದ ಗುರಾಣೆ, ಬಿಲ್ಲು, ಚೂರಿ, ಖಡ್ಗ ಇತ್ಯಾದಿ.

	ಅತಿ ಕುತೂಹಲಕಾರಿ ತಸ್ಸಿಲಿ ಚಿತ್ರ ಎಂದರೆ ಮನುಷ್ಯನ ತಲೆ ಇರುವ ಒಂದು ಪ್ರಾಣಿ.

	ಇಂಥ ಚಿತ್ರಗಳ ಅಧ್ಯಯನ ಮಾನವನ ಅಂದಂದಿನ ಜೀವನಕ್ರಮವನ್ನು ತಿಳಿಯಲು ಅಗತ್ಯವಾದ ಒಂದು ಸಾಧನ.										(ಕೆ.ಕೆ.ಎಸ್ ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ